ಮಠದ ಬಗ್ಗೆ

ಅರಮನೆ- ಗುರುಮನೆ ಪರಂಪರೆ


ಭಾರತದ ಇತಿಹಾಸದಲ್ಲಿ ಕಿತ್ತೂರು ಅಚ್ಚಳಿಯದ ಊರು. ವೀರರಾಣಿ ಚನ್ನಮ್ಮಾಜಿ ಬ್ರಿಟಿಷರ ವಿರುದ್ಧ ಕ್ರಿ.ಶ.1824ರಲ್ಲಿ ಸ್ವಾತಂತ್ರ್ಯ ಕಹಳೆಯನ್ನೂದಿದ ಪ್ರಪ್ರಥಮ ವೀರಮಹಿಳೆ. ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂದೇ ಹೆಸರಾದ, ಭಾರತೀಯ ವೀರನಾರಿ. ಸ್ವಾಭಿಮಾನ, ಧೈರ್ಯ, ಸಾಹಸಗಳ ತ್ರಿವೇಣಿ ಸಂಗಮದಂತಿರುವ ಚನ್ನಮ್ಮಾಜಿ. ಪ್ರಜೆಗಳನ್ನು ಧರ್ಮ, ನ್ಯಾಯ, ನೀತಿಯಿಂದ ಪರಿಪಾಲಿಸಿದಳು. ಕಿತ್ತೂರು ಅರಸು ಮನೆತನಕ್ಕೆ ಸದಾ ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಶಕ್ತಿಯಾಗಿ, ಸನ್ಮಾರ್ಗದರ್ಶಕರಾಗಿ ಆಶೀರ್ವದಿಸಿದರು ಕಿತ್ತೂರಿನ ರಾಜಗುರು ಸಂಸ್ಥಾನಕಲ್ಮಠದ ಪೂಜ್ಯ ಮಠಾಧೀಶ್ವರರು. ಅವರು ಬಸವಾದಿ ಪ್ರಥಮರ ದಿವ್ಯ ಪರಂಪರೆಯ ಬಳಿವಿಡಿದು ಬಂದವರು.
ಕಿತ್ತೂರ ಸಂಸ್ಥಾನವು ೧೫೮೫ರಲ್ಲಿ ಚಿಕ್ಕಮಲ್ಲಶೆಟ್ಟಿ – ಹಿರೇಮಲ್ಲಶೆಟ್ಟಿ ದೇಸಾಯಿ ಅವರಿಂದ ಸಂಪಗಾವಿಯಲ್ಲಿ ಪ್ರಾರಂಭವಾಯಿತು . ಸಂಸ್ಥಾನಂದ್ ಐದನೇ ದೊರೆ ಅಲ್ಲಪ್ಪಗೌಡನು ಒಂದು ಕನಸು ಕಂಡ . ಆ ಕನಸಿನಲ್ಲಿ ದಟ್ಟ ಕಾಡಿನೊಳಗೆ ಲಿಂಗಪೂಜಾನಿರತ ತೇಜೋಮೂರುತಿಯಾದ ಶಿವಯೋಗಿಗಳೊಬ್ಬರು ಗೋಚರಿಸಿ ತಮ್ಮ ದರುಶನಕ್ಕೆ ಬರಲು ಅಪ್ಪಣೆ ಮಾಡಿದರು . ಅಲ್ಲಪ್ಪಗೌಡ ಕನಸಿನಲ್ಲಿ ಕಂಡ ಭೌಗೋಳಿಕ ಪರಿಸವನ್ನು ಹುಡುಕುತ್ತ ಆಪ್ತಜನರೊಂದಿಗೆ ಕಿತ್ತೂರಿಗೆ ಬಂದನು. ಅಲ್ಲಿದ್ದ ಶಿವಯೋಗಿಗಳ ದರ್ಶನದಿಂದ ಪುನೀತನಾಗಿ ಅಪ್ಪಣೆ ಏನೆಂದು ಕೇಳಿದನು. ರಾಜಧಾನಿಯನ್ನು ಸಂಪಗಾವಿಯಿಂದ ಕಿತ್ತೂರಿಗೆ ವರ್ಗಾಯಿಸಿದರೆ ಸಂಸ್ಥಾನವು ಅತ್ಯಂತ ಕೀರ್ತಿಶಾಲಿಯಾಗಿ ಶ್ರೇಯೋಭಿವೃದ್ಧಿ ಹೊಂದುವುದೆಂದು ಆಶೀರ್ವದಿಸಿದರು. ಆ ಶಿವಯೋಗಿಗಳೇ ಕಲ್ಮಠದ ಪ್ರಥಮ ಗುರು ಕರ್ತೃಪೂಜ್ಯ ಶ್ರೀ ಆದಿಗುರುಸಿದ್ಧ ಮಹಾಸ್ವಾಮಿಗಳವರು.
ಅಲ್ಲಪ್ಪಗೌಡ ಕಿತ್ತೂರನ್ನು ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ನಡೆಸಲಾರಂಭಿಸಿದರು. ಪೂಜ್ಯ ಶ್ರೀ ಆದಿಗುರುಸಿದ್ಧ ಮಹಾಸ್ವಾಮಿಗಳವರನ್ನು ರಾಜಾಗುರುಗಳೆಂದು ಗೌರವಿಸಿ ಅವರ ನಿತ್ಯ ಶಿವಯೋಗ ಪೂಜಾನುಷ್ಠಾನಕ್ಕೆ ಅನಕೂಲವಾಗುವಂತೆ ತುಂಬುಹೃದಯದ ಭಕ್ತಿಯಿಂದ ಚೌಕಿಮಠವನ್ನು ಕ್ರಿ.ಶ.1660 ರಲ್ಲಿ ಕಟ್ಟಿಸಿ . ಸಂಸ್ಥಾನದಿಂದ ಅಪಾರ ದಾನ ದತ್ತಿಗಳನ್ನು ಗುರುಕಾಣಿಕೆಯಾಗಿ ಸಮರ್ಪಿಸಿ ಸಂತುಷ್ಟನಾದನು.
ಸಂಸ್ಥಾನದ ಪರಂಪರೆಯ ಸಮಸ್ತ ದೊರೆಗಳು ನಿತ್ಯ ರಾಜಗುರುಗಳ ದರ್ಶನ ಪಡೆದುಕೊಂಡು ಪಾದೋದಕ ಪ್ರಸಾದ ಸ್ವೀಕರಿಸಿ ನಾಡು ನುಡಿ ಸಂಸ್ಕೃತಿಯನ್ನು ಬೆಳೆಸಲು ಕೃಥಾಸಂಕಲ್ಪರಾಗಿ ಗುರು ಮಾರ್ಗದರ್ಶನದಂತೆ ನಡೆಯುತ್ತಿದ್ದರು.
ಗುರುವಿಗಿಂತ ಅಧಿಕ ಬಂಧುಗಳುಂಟೆ? ಎಂದು ನಂಬಿದ ಅರಮನೆಯ ಸಮೀಪ ಭವ್ಯವಾದ ಕಲ್ಮಠವನ್ನು ನಿರ್ಮಿಸಿಕೊಟ್ಟರು. ಗುರುಪಾದ ಸ್ಪರ್ಶದಿಂದ ಮುಕ್ತಿವುಂಟೆದು

ದೊರೆಗಳು ತಮ್ಮ ಸಮಾದಿಗಳನ್ನು ಕಲ್ಮಠದ ಆವರಣದಲ್ಲಿ ನಿರ್ಮಿಸಿಕೊಂಡಿರುವುದು ಗುರು ಶಿಷ್ಯರ ಅಮರ ಸಂಬಧದ ಸಾಕ್ಷಿಯಾಗಿ ಬಾಂಧವ್ಯದ ಕುರುಹಾಗಿದೆ.
ಪತಿ ಸುತರನ್ನು ಅಗಲಿದ ಚನ್ನಮ್ಮಾ ಬದುಕಿನಲ್ಲಿ ಬೆಸತ್ತು ಆಡಲಿತದಲ್ಲಿ ಆಸಕ್ತಿ ಕಳೆದುಕೊಂಡು ಬಸವಳಿದಾಗ, ಅವಳಲ್ಲಿದ್ದ ಸುಪ್ತವಾದ ಪ್ರಜಾಪ್ರೇಮ, ನಾಡಹಿತ ರಕ್ಷಣೆಯ ಕರ್ತವ್ಯವನ್ನು ಜಾಗೃತಗೊಳಿಸಿ. ಸ್ವಾತಂತ್ರ್ಯ ಹೋರಾಟ್ಟಕ್ಕೆ ಮತ್ತೆ ನವಚೈತನ್ಯ ಸ್ಫೂರ್ತಿ ತುಂಬಿದವರು ಅಂದಿನ ಕಲ್ಮಠಾದಿಶರಾದ ಪೂಜ್ಯ ಶ್ರೀ ಮಡಿವಾಳ ಮಹಾಸ್ವಾಮಿಗಳು ಹಾಗೂ ಪೂಜ್ಯ ಶ್ರೀ ಪ್ರಭುಸ್ವಾಮಿಗಳು.
ಲೀಲಾ ಶಿವಯೋಗಿ ಶಾಪಾನುಗ್ರಹಸಮರ್ಥ ಗರಗದ ಪೂಜ್ಯ ಶ್ರೀ ಮಡಿವಾಳ ಶಿವಯೋಗಿಗಳು ಕಿತ್ತೂರಿನ ಕಲ್ಮಠದ ಪೂಜ್ಯ ಶ್ರೀ ಮುದಿಮಡಿವಾಳ ಮಹಾಸ್ವಾಮಿಗಳವರ ಕರಸಂಜಾತರಾಗಿ ಕಿತ್ತೂರಿನ ಶ್ರೀಮಠದಲ್ಲಿಯೇ ಬೆಳೆದು ನಾಡಿಗೆ ಬೆಳಕಾಗಿರುವುದು ಅವಿಸ್ಮರಣೀಯವಾಗಿದೆ.
ಕಿತ್ತೂರು ಸಂಸ್ಥಾನ ಪತನವಾದ ಬಳಿಕ ಕಲ್ಮಠದ ಪೀಠಾಧಿಪತಿಗಳು ಭಕ್ತರಿಗೆ ಧಾರ್ಮಿಕ ಮಾರ್ಗದರ್ಶನಮಾಡುತ್ತ. ಮಠದ ಆಸ್ತಿ ಪಾಸ್ತಿಗಳನ್ನು ಅಭಿವೃದ್ಧಿಪಡಿಸುತ್ತ, ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತ ಬಂದರು, ಅದರ ಪರಿಣಾಮವಾಗಿ ಕಲ್ಮಠವು ಸುಪ್ರಸಿದ್ಧ ಧಾಮ್ರಿಕ-ಸಾಂಸ್ಕøತಿಕ ಕೇಂದ್ರವಾಗಿ ಬೆಳೆಯಿತು, “ದೇಶ ಸೇವೆಯೇ ಈಶ ಸೇವೆ” ಯೆಂದು ಅರಿತ ಶ್ರೀಮಠದ ಪೂಜ್ಯರು ಅಂದಿನ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ
ದೇಶಭಕ್ತರಿಗೆ ಅಶ್ರಯ ನೀದಿ ಹೋರಾಟದ ವಿಜಯಕ್ಕೆ ಸೂರ್ತಿಯಾಗಿ ತಮ್ಮ ತನು-ಮನ-ಧನವನ್ನು ರಾಷ್ಟ್ರಸೇವೆಗೆ ಸಮರ್ಪಿಸಿದರು.
ಕಲ್ಮಠದ ಹತ್ತನೆಯ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳವರ ತ್ಯಾಗ, ಯೋಗ, ಸಮಾಜಸೇವೆಗಳು ಸದಾ ಸ್ಮರಣೀಯವಾಗಿವೆ. “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಎಂಬ ಶರಣರ ನುಡಿಯನ್ನು ತರಲು 1950ರಲ್ಲಿ “ಕಿತ್ತೂರ ನಾಡ ವಿದ್ಯಾವರ್ಧಕ ಸಂಘ”ವನ್ನು ಸಂಸ್ಥಾಪಿಸಿ ಅದರ ಆಶ್ರಯದಲ್ಲಿ ಹೊಸ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ ಧೀಮಂತರು. ವಿದ್ಯಾದಾನದ ಜೊತೆಗೆ ಶ್ರೀ ಮಡಿವಾಳೇಶ್ವರ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ದಾಸೋಹ ಮೂರ್ತಿಗಳೆನಿಸಿದರು. ಮಹಿಳಾ ಮಂಡಳ, ಶಿಶುವಿಹಾರಗಳಂಥ ಅನೇಕ ಸಾಮಾಜಿಕ ಹಿತಚಿಂತನೆಯ ಸೇವಾಸಂಸ್ಥೆಗಳನ್ನು ಮುನ್ನಡೆಸಿ ಸಕಲ ಭಕ್ತಾನುರಾಗಿಗಳಾಗಿದ್ದರು. ಅವರು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಅನೇಕ ರೆಂಬೆ ಕೊಂಬೆಗಳನ್ನು ಚಾಚಿಕೊಂಡು ಜ್ಞಾನದಾಹಿಗಳಿಗೆ ನೆರಳಾಗಿ ಫಲಪ್ರದಾನ ಮಾಡುತ್ತಿದೆ.
ಪ್ರಸ್ತುತ ರಾಜಗುರು ಸಂಸ್ಥಾನಕಲ್ಮಠದ ಹದಿಮೂರನೆಯ ಪೀಠಾಧೀಶ್ವರರಾಗಿರುವ ಪೂಜ್ಯಶ್ರೀ ಮಡಿವಾಳ ಸ್ವಾಮಿಗಳು ಸ್ನಾತಕೋತರ ಪದವೀಧರರು. ಶಿಸ್ತು-ಸೌಜನ್ಯ ಮೂರ್ತಿಗಳಾದ ಶ್ರೀಗಳು ಸ್ವತಃ ಸಾಹಿತಿಗಳಾಗಿರುವರು. ಅವರು ರಚನೆ ಮಾಡಿರುವ “ಅಕ್ಕಮಹಾದೇವಿಯ ವಚನ ಪದಪ್ರಯೋಗ ಕೋಶ”ವು ನಾಡಿನ ವಿದ್ವಾಂಸರು ಗಮನ ಸೆಳೆದಿದೆ, ಸಮಾಜ, ಧರ್ಮ, ಶಿಕ್ಷಣ, ಸಂಸ್ಕøತಿ, ಸಾಹಿತ್ಯ, ಕಲೆ ಮುಂತಾದ ವಿವಿಧ ರಂಗಗಳಲ್ಲಿ ಪ್ರಗತಿಪರ ಮತ್ತು ವೈಚಾರಿಕ ಹಿನ್ನೆಲೆಯಲ್ಲಿ ಶ್ರೀಮಠವನ್ನು ಮುನ್ನಡೆಸಲು ಸಂಕಲ್ಪಮಾಡಿರುವರು.


ಸಂಕಲ್ಪಗಳು :


• ಚೌಕಿಮಠದ ಜೀರ್ಣೋದ್ಧಾರ

• ಶ್ರೀ ಮಡಿವಾಳೇಶ್ವರ ಪ್ರಸಾದ ನಿಲಯ ಪುನರುದ್ಧಾರ

• ಶ್ರೀ ಮಠದ ಆವರಣದಲ್ಲಿರುವ ಅರಸರ ಸ್ಮಾರಕಗಳ ಸಂರಕ್ಷಣೆ

• ಕಿತ್ತೂರು ಇತಿಹಾಸ ಕುರಿತು ಸಂಶೋಧನೆ, ಸಾಹಿತ್ಯ ಸಂರಕ್ಷಣೆ ಹಾಗೂ ವಿಚಾರ ಸಂಕಿರಣ ನಡೆಸುವುದು.

• ಶ್ರೀ ಗುರುಸಿದ್ಧೇಶ್ವರ ಅನುಭಾವ ಮಂಟಪ ನಿರ್ಮಾಣ

• “ಶರಣ ಸಾಹಿತ್ಯ ಅಕಡೆಮಿ” ಮುಖಾಂತರ ಗ್ರಂಥಗಳ ಪ್ರಕಟಣೆ

• ವೃದ್ಧಾಶ್ರಮ, ಅನಾಥಾಶ್ರಮ ತೆರೆಯುವುದು.

• ಗ್ರಂಥಾಲಯ ನಿರ್ಮಾಣ

• ಶಿಕ್ಷಣ, ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವದು ಮತ್ತು ಪ್ರಸಾರ ಮಾಡುವುದು.

ಈ ಎಲ್ಲ ಸಂಕಲ್ಪಗಳ ಅನುಷ್ಠಾನಕಾಗಿ ಸಂಸ್ಥಾನ ಕಲ್ಮಠದ ಭಕ್ತರ ಸಹಾಯ-ಸಹಕಾರವನ್ನು ಅಪೇಕ್ಷಿಸುತ್ತೇವೆ.